ಉಷ್ಣವಲಯದ ವ್ಯವಸಾಯ

ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೂ ಮಕರ ಸಂಕ್ರಾಂತಿ ವೃತ್ತಕ್ಕೂ ನಡುವೆ ಇರುವ ಪ್ರದೇಶವಾದ ಉಷ್ಣವಲಯದಲ್ಲಿ ನಡೆಯುತ್ತಿರುವ ಎಲ್ಲ ಬಗೆಯ ಕೃಷಿಕಾರ್ಯ, ಪಶುಪೋಷಣೆ, ಭೂಮಿಯ ಒಟ್ಟು ನೆಲದ ವಿಸ್ತೀರ್ಣದಲ್ಲಿ ಸುಮಾರು ಕಾಲು ಭಾಗ ಉಷ್ಣವಲಯದಲ್ಲಿದೆ. ಇಡೀ ವಿಶ್ವದ ಪ್ರಜಾಸಂಖ್ಯೆಯ ಮೂರರಲ್ಲೊಂದು ಭಾಗ ವಾಸಿಸುವುದು ಈ ವಲಯದಲ್ಲಿ, ಈ ಜನರಲ್ಲಿ ಬಹುಸಂಖ್ಯಾತರಿಗೆ ಬೇಸಾಯದಿಂದಲೇ ಜೀವನ, ಆದ್ದರಿಂದ ಉಷ್ಣವಲಯದ ವ್ಯವಸಾಯದ ಪ್ರಾಮುಖ್ಯ ಎಷ್ಟೆಂದು ಹೇಳಬೇಕಾದ್ದೇ ಇಲ್ಲ.

ಉಷ್ಣವಲಯದ ವಾಯುಗುಣವನ್ನು ಎಷ್ಟು ಖಚಿತವಾಗಿ ಗುರುತಿಸಬಹುದೋ ಅಷ್ಟೇ ಖಚಿತವಾಗಿ ಇಲ್ಲಿನ ಬೇಸಾಯವನ್ನೂ ಗುರುತಿಸುವುದು ಸಾಧ್ಯ. ಉಷ್ಣವಲಯದ ಬೇಸಾಯ ಪ್ರದೇಶಕ್ಕೂ ಅಧಿಕಾಕ್ಷಾಂಶದ ಪ್ರದೇಶಕ್ಕೂ ನಡುವೆ ಸಾಮಾನ್ಯವಾಗಿ ಪರ್ವತಶ್ರೇಣಿಗಳೂ ಮರುಭೂಮಿಗಳೂ ಅಡ್ಡ ಹಾಯ್ದಿವೆಯಾದ್ದರಿಂದ ಈ ಬೇಸಾಯ ಪ್ರದೇಶ ಇತರ ವಾಯುಗುಣಗಳ ವ್ಯವಸಾಯ ಪ್ರದೇಶಗಳಿಗಿಂತ ಪ್ರತ್ಯೇಕವಾಗಿದೆ. ಆದರೆ ಬ್ರೆಜಿóóಲ್, ಭಾರತ, ಚೀನಗಳಲ್ಲಿ ಈ ಬಗೆಯ ಪ್ರತ್ಯೇಕತೆ ಇಲ್ಲವಾದ್ದರಿಂದ ಅಲ್ಲಿ ಇದು ಎಲ್ಲಿ ಕೊನೆಗೊಳ್ಳುವುದೆಂದು ನಿಷ್ಕøಷ್ಟವಾಗಿ ನಿರ್ಣಯಿಸುವುದು ಕಷ್ಟ ಸಾಧ್ಯ. ಉಷ್ಣವಲಯದ ಬೆಳೆಗಳೂ ಬೇಸಾಯ ಪದ್ಧತಿಗಳೂ ಈ ವಲಯದ ಹೊರಗಿನ ಪ್ರದೇಶಗಳಲ್ಲೂ ಅಲ್ಲಲ್ಲಿ ಕಂಡುಬರುವುದುಂಟು.

ಉಷ್ಣವಲಯದ ಹವಾಗುಣ ಪ್ರಾಣಿಗಳಿಗೂ ಸಸ್ಯಗಳಿಗೂ ಬಲು ಉತ್ತೇಜಕ, ಇವು ಇಲ್ಲಿ ವರ್ಣವೈವಿಧ್ಯಪೂರಿತವಾಗಿವೆ. ಆದರೆ ಒಂದೊಂದು ಪ್ರದೇಶದಲ್ಲೂ ಹಲವಾರು ಬಗೆಯ ಬೆಳೆ ತೆಗೆಯುವುದು ಸಾಧ್ಯವಾಗುವುದಿಲ್ಲ. ಇದಕ್ಕೆ ಅನುವಾದ ಆವರಣ (ಈಕಾಲಜಿ) ಇಲ್ಲಿ ಕಂಡುಬರುವುದಿಲ್ಲ. ಉಷ್ಣತೆಯೇನೋ ಇಲ್ಲಿ ಅನುಕೂಲಕರ. ಎತ್ತರ ಪ್ರದೇಶಗಳಲ್ಲಿ ಸಮಶೀತೊಷ್ಣವಲಯದ ಫಸಲು ತೆಗೆಯಬಹುದು. ಏನೂ ಬೆಳೆಯದಷ್ಟು ಚಳಿಯಿರುವ ಎತ್ತರ ಪ್ರದೇಶ ಬಲು ಕಡಿಮೆ, ಮಾರಕ ಹಿಮ ಬೀಳುವ ಸ್ಥಳಗಳೂ ಅತ್ಯಲ್ಪ.

ಉಷ್ಣವಲಯ ಪ್ರದೇಶದಲ್ಲಿ ವರ್ಷ ಪೂರ ಉಷ್ಣತೆಯ ವ್ಯತ್ಯಾಸ ಕಡಿಮೆ, ಹಗಲು ರಾತ್ರಿಗಳ ಉಷ್ಣದ ಅಂತರ ಕೆಲವೆಡೆಗಳಲ್ಲಿ ಹೆಚ್ಚು, ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಮಳೆಯ ಹೊಡೆತದಿಂದ ನೆಲದ ಲವಣಾಂಶ ಕೊಚ್ಚಿ ಹೋಗಿರುವುದುಂಟು. ಮಳೆಯ ನೀರು, ಎಲೆ, ಹಸಿರು ಕೊಳೆತು ಗಿಡ ಬೇರಿಗೆ ಅಂಟಿಕೊಂಡ ಜೇಡಿಮಣ್ಣಿರುತ್ತವೆ. ಅನೇಕ ಕಡೆಗಳಲ್ಲಿ ವರ್ಷವೆಲ್ಲ ಮಳೆ, ಹೆಚ್ಚಾಗಿ ಮಳೆ ಬೀಳುವಲ್ಲಿ ಗಿಡಗಂಟೆ ಸೊಂಪಾಗಿ ಮಹಡಿ ಮಹಡಿಯಾಗಿ ಬೆಳೆದಿರುವುದುಂಟು. ಆದರೆ ಬೇಸಾಯಕ್ಕೆ ಅನುಕೂಲ ಕಡಿಮೆ.

ಅಧಿಕ ಮಳೆ ಮತ್ತು ಹೆಚ್ಚು ಉಷ್ಣಾಂಶವಿರುವುದರಿಂದ ಸಸ್ಯಗಳು ವರ್ಷವಿಡೀ ಬೆಳೆಯುತ್ತಲೇ ಇರಲು ಅನುಕೂಲವಿದೆ. ಅಂಥ ಪ್ರದೇಶಗಳಲ್ಲಿ ದಟ್ಟಕಾಡುಗಳು ಬೆಳೆಯುವುದು ಸಹಜ ಬೆಳೆಸಿನ ತೀವ್ರತೆ ಸಮಶೀತೋಷ್ಣವಲಯಕ್ಕಿಂತ ಹೆಚ್ಚು. ಇಲ್ಲಿ ನೆಲದ ಮೇಲೆ ಹರಡುವ ಎಲೆ ಕಸಕಡ್ಡಿಗಳು ಬಹುಕಾಲ ಹಾಗೇ ಉಳಿಯದೆ ಸೂಕ್ಷ್ಮಾಣುಗಳ ಸಹಾಯದಿಂದ ಸಸ್ಯ ಆಹಾರಾಂಶಗಳಾಗಿ ಮಾರ್ಪಾಟುಗೊಂಡು, ಅದೇ ಸಸ್ಯಗಳ ಬೆಳೆವಣಿಗೆಗೆ ಪೋಷಕವಾಗುತ್ತದೆ. ಇದರಿಂದಲೇ ಫಲವತ್ತು ಕ್ಷಯಿಸದೆ ಹಾಗೇ ಉಳಿದಿರುವಂತೆ ತೋರಿ, ಅಲ್ಲಿಯ ಭೂಪ್ರದೇಶ ಅತ್ಯಂತ ಫಲವತ್ತೆಂಬ ಭ್ರಮೆಯಾಗುತ್ತದೆ. ಆದರೆ ಅದು ನಿಜವಲ್ಲ, ಫಲವತ್ತು ದಟ್ಟಮರ ಬೆಳೆಯುತ್ತಿದ್ದಂತೆ ಮಾತ್ರ. ಅದನ್ನು ಕಡಿದು ನಾಶಪಡಿಸಿದಲ್ಲಿ ಗೊಬ್ಬರಾಂಶವಾಗಲು ಸಾಕಾದಷ್ಟು ಸಾವಯವ ಸಾಮಗ್ರಿ ದೊರಕದೆ ಯಾವುದೇ ಬೆಳೆಸು ಕುಂಠಿತವಾಗುತ್ತದೆ. ಆದ್ದರಿಂದಲೇ ಅನೇಕ ವ್ಯವಸಾಯ ಯೋಜನೆಗಳು ಇಲ್ಲಿ ನಿಷ್ಫಲವಾಗುತ್ತವೆ. ಅತೀವ ಮಳೆ ಮತ್ತು ಉಷ್ಣತೆ, ಕೀಟ ಮತ್ತಿತರ ಉಪದ್ರವಕಾರಿಗಳ ವೃದ್ಧಿಗೆ ಅನುಕೂಲವಾಗಿ ಜನ, ಜಾನುವಾರುಗಳಿಗೆ ಹೆಚ್ಚಿನ ತೊಂದರೆಯಾಗುವುದರಿಂದ ಇಲ್ಲಿ ಅತಿ ಹೆಚ್ಚಿನ ಜನಸಾಂದ್ರತೆಯಿರುವುದಿಲ್ಲ.

ಉಷ್ಣವಲಯದಲ್ಲಿ ಜ್ವಾಲಾಮುಖಿಗಳಿಂದ ಉತ್ಪನ್ನವಾದ ಜಾವಾದ ಕೆಲಭಾಗ, ಫಿಲಿಪೈನ್ಸ್, ಮಧ್ಯ ಅಮೆರಿಕ ಮುಂತಾದೆಡೆ ಅಡಿಯಲ್ಲಿ ಲಾವಾರಸದ ಕಲ್ಲುಗಳಿಂದ ಮೇಲಿನ ಪೋಷಕಾಂಶಗಳು ತೂರಿ ಹೋಗದೆ ಫಲವತ್ತಾಗಿ ಉಳಿದು ಉತ್ತಮ ವ್ಯವಸಾಯ ಯೋಗ್ಯ ಪ್ರದೇಶಗಳಾಗಿವೆ. ಅಲ್ಲದೆ ಅದೇ ಪ್ರದೇಶದಲ್ಲಿ ಎತ್ತರಕ್ಕೆ ಹೋದಂತೆ ವಾಯುಗುಣ ಮಾರ್ಪಟ್ಟು ಸಮಶೀತೋಷ್ಣವಾಗಿ, ಉಷ್ಣವಲಯದಲ್ಲಿದ್ದರೂ ಸಮಶೀತೋಷ್ಣವಲಯಕ್ಕೆ ಹೊಂದಿದಂಥ ಸಸ್ಯಗಳೇ ಬೆಳೆಯುತ್ತವೆ. ಆದರೆ ಅಲ್ಲಿನ ಹಗಲು ರಾತ್ರಿಗಳ ಹವಾಗುಣಗಳ ಅಂತರ ಹೆಚ್ಚಾಗಿರುವುದರಿಂದ ಸ್ವಲ್ಪ ಮಾರ್ಪಾಟು ಹೊಂದಿರುತ್ತದೆ.

ಇದರಿಂದಲೇ ಈ ಪ್ರದೇಶದಲ್ಲಿ ಬೆಳೆಯ ವೈವಿಧ್ಯ ಅಧಿಕ, ತೆಂಗು, ಅಡಿಕೆ, ಕೋಕೋ, ಕಬ್ಬು, ಸಣಬು, ಮನಿಲಾ ಮತ್ತು ಇತರ ನಾರುಗಳು, ವಿವಿಧ ಔಷಧಗಳು, ಕೀಟನಾಶಕ ಪದಾರ್ಥಗಳು, ಮೆಣಸು, ಲವಂಗ, ಜಾಯಿಕಾಯಿ, ದಾಲ್ಚಿನ್ನಿ ಮುಂತಾದ ಸಂಬಾರ ವಸ್ತುಗಳೂ, ವಿವಿಧ ಎಣ್ಣೆ ಉತ್ಪಾದಕ ವೃಕ್ಷ ಮತ್ತು ಸಸ್ಯಗಳೂ ಬತ್ತ ಮುಂತಾದ ಧಾನ್ಯಗಳೂ ವಿಫುಲವಾಗಿ ಬೆಳೆಯುತ್ತವೆ. ಮನೆಗೆ ಉಪಯುಕ್ತವಾದ ವಿವಿಧ ಜಾತಿ ಮರಗಳು-ಬೀಟೆ, ಸಾಗುವಾನಿ, ಮಹಾಗನಿ-ಇಲ್ಲಿ ಹೆಚ್ಚು, ರಬ್ಬರ್, ಗಟಪರ್ಚ, ಡೆಕಲ್ ಅಂಬು, ರಾಳ, ಅರಗು ಮುಂತಾದವು ಇಲ್ಲಿನ ಮುಖ್ಯ ಉತ್ಪನ್ನ, ಪಪಾಯಿ, ಬಾಳೆ, ಅನಾನಸ್, ದೂರಿಯಾನ್ ಮಾಂಗೊಸ್ಟೀನ್, ಮಾವು ಹಲಸು ಮುಂತಾದ ಬಹು ಜನಪ್ರಿಯ ಹಣ್ಣುಗಳ ವೈವಿಧ್ಯ ಉಷ್ಣವಲಯದಲ್ಲಿ ಮಾತ್ರ ಸಾಧ್ಯ; ಹಾಗೂ ಅಲ್ಲಿ ಅನುಕೂಲತೆ ಏರ್ಪಡಿಸಿದಲ್ಲಿ ಹೊಂದಿಕೊಳ್ಳುವ ಹತ್ತಿ, ಮುಸುಕಿನ ಜೋಳ, ತಂಬಾಕು, ಸಿಸಾಲ ನಾರು ಇತ್ಯಾದಿ, ಬಹು ಸಮರ್ಪಕವಾಗಿ ಬೆಳೆಯುತ್ತವೆ.

ಇಲ್ಲಿನ ಹಿಂದುಳಿದ ವ್ಯವಸಾಯ ಮಾರ್ಗವೆಂದರೆ ಒಂದು ಪ್ರದೇಶವನ್ನು ಗುರುತಿಸಿ ಅಲ್ಲಿ ಕಾಡು ಕಡಿದು ಒಣಗಿಸಿ ಸುಟ್ಟು, ಮಳೆ ಬಂದಾಗ ಮೇಲ್ಮಣ್ಣನ್ನು ಕೆದಕಿ ಬೆಳೆ ಇಡುವುದು, ಇಲ್ಲಿನ ಬೆಳೆ ಸಾಮಾನ್ಯವಾಗಿ ನಾರು ಸಂಬಂಧವಾದದ್ದು ಅಥವಾ ಹೊಗೆಸೊಪ್ಪು. ಕಡಿದಾದ ಕಣಿವೆಗಳಲ್ಲೂ ಬದು ಹಾಕಿ ಇದೇ ಮಾರ್ಗ ಅನುಸರಿಸುವರು. ಇನ್ನೂ ಬೇರು ಮುಂತಾದವು ಇರುವುದರಿಂದ ನೇಗಿಲ ಉಪಯುಕ್ತತೆ ಸಾಧ್ಯವಿಲ್ಲ. ಆದ್ದರಿಂದ ಎಲ್ಲಿ ಜನ ಮತ್ತು ಭೂಪ್ರದೇಶದ ಅಭಾವವಿಲ್ಲವೋ ಅಲ್ಲಿ ಮಾತ್ರ ಈ ಪದ್ಧತಿ ಅನುಸರಿಸಲು ಸಾಧ್ಯ. ಒಂದೆರಡು ಬೆಳೆ ತೆಗೆದು ಫಲವತ್ತು ಕಡಿಮೆಯಾದೊಡನೆ ಅಲ್ಲಿ ಪುನಃ ಕಾಡು ಎಬ್ಬಿಸಿ, ಬೇರೊಂದು ಸ್ಥಳವನ್ನು ಆರಿಸಿ ಅದೇ ಮಾರ್ಗವನ್ನನುಸರಿಸುತ್ತಾರೆ. ಎರಡು ಮೂರು ವರ್ಷಕ್ಕಿಂತ ದೀರ್ಘಕಾಲ ಅದನ್ನು ಅನುಸರಿಸಬೇಕಾದಲ್ಲಿ ಗೊಬ್ಬರ ಒದಗಿಸಬೇಕಾಗುತ್ತದೆ.

ಕಡಿಮೆ ಮಳೆ ಬೀಳುವ-ವರ್ಷದಲ್ಲಿ ಸ್ವಲ್ಪಕಾಲ ಒಣಹವೆ ಇರುವ-ಕಡೆಗಳಲ್ಲೂ ಫಲವತ್ತಿನ ಅಭಾವ, ಕ್ರಿಮಿಕೀಟ ಮುಂತಾದ ಎಲ್ಲ ಪ್ರತಿಕೂಲಗಳೂ ಇವೆ. ಜತೆಗೆ ನೀರಾವರಿಯ ಸೌಲಭ್ಯವಿಲ್ಲದೆ ವರ್ಷವೆಲ್ಲ ಬೆಳೆಯ ಕೆಲಸ ನಡೆಸುವುದು ಇಲ್ಲಿ ಸಾಧ್ಯವಿಲ್ಲ. ಪಶುಸಂಪತ್ತಿನ ವೃದ್ಧಿಗೂ ಅಡಚಣೆಯಾಗಿ ಅನೇಕ ರೋಗಗಳ ಹಾವಳಿ ಇಲ್ಲುಂಟು.

ಉಷ್ಣವಲಯದಲ್ಲಿ ಅನೇಕ ಪ್ರಾಣಿಗಳನ್ನು ಸಾಕುತ್ತಾರೆ. ಅನೇಕ ಕಡೆಗಳಲ್ಲಿ ಹಂದಿಯೇ ಊರಿನ ಜಾಡಮಾಲಿ, ಕೋಳಿ, ಆಡು, ಕುರಿ(ಎತ್ತರದ ನೆಲದಲ್ಲಿ ಕಡಿಮೆ ಮಳೆ ಬೀಳುವೆಡೆಯಲ್ಲಿ), ಕೊಂಬಿರುವ ಹಸು, ಎಮ್ಮೆ ಇವು ಸಾಮಾನ್ಯ. ಕುದುರೆಯನ್ನು ಬೇಸಾಯಕ್ಕೆ ಉಪಯೋಗಿಸುವುದು ಅಮೆರಿಕ ಹಾಗೂ ಮುಸ್ಲಿಂ ರಾಷ್ಟ್ರಗಳಲ್ಲಿ ಮಾತ್ರ.

ನೀರು ಹರಿಯುವ ತಗ್ಗು ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಮೇಲಿನಿಂದ ಹರಿದು ಬರುವ ನೀರಿನಲ್ಲೂ ಆಹಾರಾಂಶವಿದ್ದು ಬತ್ತ ಚೆನ್ನಾಗಿ ಬೆಳೆಯುತ್ತದೆ. ಇದಕ್ಕೆ ಹೆಚ್ಚಿನ ಗೊಬ್ಬರವನ್ನೂ ಒದಗಿಸಲಾಗುತ್ತದೆ. ಸ್ವಲ್ಪ ಇಳಿಜಾರಾದ ವಿಸ್ತಾರ ಪ್ರದೇಶಗಳಲ್ಲಿ ಹೆಚ್ಚಾಗಿ ಮುಸುಕಿನ ಜೋಳ, ಗೋಧಿ, ಜೋಳ, ಹತ್ತಿ, ಮುಂತಾದುವನ್ನೂ ಬೆಳೆಯಲಾಗುತ್ತದೆ. ಇಲ್ಲಿ ಪೋಟ ನೇಗಿಲಿನ ಬಳಕೆಯಿದೆ.
ಮೆಣಸು, ಬಾಳೆ, ಮರಗೆಣಸು, ಅನಾನಸ್ ಮುಂತಾದವನ್ನು ಸಾಂದ್ರ ಬೇಸಾಯವನ್ನನುಸರಿಸಿ ತೋಟದ ಬೆಳೆಯಾಗಿ ಬೆಳೆಯಲಾಗುತ್ತದೆ.

ಕಾಫಿ, ರಬ್ಬರ್, ಎಣ್ಣೆಯ ತಾಳೇಜಾತಿ ಮರಗಳು ಮತ್ತು ಕಬ್ಬು ವಿಸ್ತಾರವಾದ ತೋಟ ಹಿಡುವಳಿಗಳಲ್ಲಿ ಹೆಚ್ಚು, ಇಂಥ ತೋಟಗಳು ಹೆಚ್ಚಾಗಿ ಯೂರೋಪಿಯನ್ನರ ವಶದಲ್ಲಿವೆ. ಹೆಚ್ಚು ಬೆಲೆಬಾಳುವ ಆಧುನಿಕ ಯಂತ್ರೋಪಕರಣಗಳ ಬಳಕೆ, ಉತ್ಪನ್ನಗಳ ವೇಗ ಸಾಗಾಣಿಕೆಯ ಸೌಲಭ್ಯ. ರೋಗರುಜಿನಾದಿಗಳನ್ನು ತಡೆಗಟ್ಟುವ ತಳಿಗಳ ಉಪಯೋಗ-ಇವುಗಳಿಂದ ಅವರು ಹೆಚ್ಚಿನ ಲಾಭ ಪಡೆಯಲು ಶಕ್ತರಾಗಿದ್ದಾರೆ.

ಏನೇ ಪ್ರತಿಕೂಲಗಳಿದ್ದರೂ ಉಷ್ಣ ಹವೆಯಲ್ಲಿ ವ್ಯವಸಾಯವೇ ಪ್ರಧಾನ, ನೆಲ, ಜಲ, ಉಷ್ಣತೆ-ಎಲ್ಲವೂ ಹದವಾಗಿರುವಲ್ಲಿ ಸಾಂದ್ರ ಬೇಸಾಯ ಸಾಮಾನ್ಯ. ಅಂಥಲ್ಲಿ ಜನಸಂಖ್ಯೆಯ ಒತ್ತಡ ಹೆಚ್ಚು, ಏಷ್ಯದ ಅನೇಕ ನದೀಬಯಲುಗಳು ಪುರಾತನ ನಾಗರೀಕತೆಗಳ ತೊಟ್ಟಿಲುಗಳು.											
   (ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ